ಮಣ್ಣಿನ ಮಗ ಗಣಪ
ನಮ್ಮ ಆದಿಮ
ಸಂಸ್ಕೃತಿಯ ಪಳಯುಳಿಕೆಗಳನ್ನು ಸರಿಯಾಗಿ ಅರ್ಥೈಸಿಕೊಂಡಾಗ ಮಾತ್ರ ನಿಜಸ್ಥಿತಿಯ
ಅರಿವುಂಟಾಗುತ್ತದೆ. ನಮ್ಮ ಪುರಾಣ ಗರ್ಭದಲ್ಲಿ ಹುದುಗಿದ ಅನೇಕ ರೂಪಕಗಳಿಗೆ ನ್ಯಾಯ ದೊರಕುತ್ತದೆ.
ಇಲ್ಲವಾದರೆ ವಾದ ವಿವಾದಗಳೆದ್ದು ಮನಸ್ಸನ್ನು ಕಲುಷಿತಗೊಳಿಸುತ್ತವೆ. ಸಮಾಜದ ಅನಾರೋಗ್ಯಕ್ಕೆ
ಕಾರಣವಾಗುತ್ತವೆ.
ಜನಪದ ಪುರಾಣದಲ್ಲಿ
ಬರುವ ಗಣಪ ಗೌರಿ ಮಗ. ಮಣ್ಣಿನ ಮಗ. ಗಣಪ ದಕ್ಷಬ್ರಹ್ಮ ಮತ್ತು ಶಿವನ ಅನಂತರದಲ್ಲಿ ಬರುವ ಪುರಾಣ
ಪುರುಷ. ದಕ್ಷ ಮಾನವನ ಮೊದಲ ಕಾಯಕವಾದ ಕುರಿ ಕಾಯುವವರ ನಾಯಕ. ಶಿವ ಪಶುಪತಿ. ಅಂದರೆ ದನಕಾಯುವವರ
ನಾಯಕ. ಈ ಎರಡು ಸಮುದಾಯದಲ್ಲಿ ಅಗಾಗ ಸಂಘರ್ಷ ನಡೆಯುತ್ತಿದ್ದವು. ಅಂತೆಯೇ ಶಿವ ದಕ್ಷಬ್ರಹ್ಮನ
ತಲೆತಗೆದ. ಇವರಿಬ್ಬರೂ ಅಲೆಮಾರಿಗಳಾಗಿದ್ದರು. ಕುರಿ ಮೇಯಿಸುತ್ತ, ದನ ಮೇಯಿಸುತ್ತ ಒಂದು ನೆಲೆಯಿಂದ ಇನ್ನೊಂದು ನೆಲೆಗೆ ಸಂಚರಿಸುತ್ತಿದ್ದರು.
ಆದರೆ ಗಣಪನ
ಕಾಲಕ್ಕೆ ಜನ ಸಮುದಾಯ ಒಂದೇ ಕಡೆ ನೆಲಸತೊಡಗಿದರು. ಹಾಗೆ ನೆಲೆಗೊಂಡ ಜನಸಮುದಾಯ ಕೃಷಿ ಮಾಡುವ
ಕಾಯಕದಲ್ಲಿ ನಿರತರಾದರು. ಈ ಕೃಷಿ ಸಮುದಾಯದ ನಾಯಕನೇ ಗಣಪ. ಅದಕ್ಕಾಗಿಯೇ ಅವನು ಮಣ್ಣಿನ ಮಗ, ಬೆವರಿನ ಮಗ.
ನದಿ ದಡದ ಫಲವತ್ತಾದ
ನೆಲದಲ್ಲಿ ಉತ್ತಿ ಬಿತ್ತಿ ಬೆಳೆ ತೆಗೆವ ಕಲೆ
ಮತ್ತು ವಿಜ್ಞಾನವನ್ನು ಬಳಕೆಗೆ ತಂದವ ಗಣಪ. ಆದ್ದರಿಂದಲೇ ಈತ ಮೊದಲ ಕೃಷಿ ವಿಜ್ಞಾನಿ. ನಾಯಕನಾಗಿ
ಬೆಳೆದ ಗಣಪನಿಗೆ ಕೃಷಿಕರು ನೀಡುವ ನೈವೇದ್ಯ ಅವರ ಹೊಲದ ಕರಕಿ. ಅವರು ಮೊದಲು
ನಿಯಂತ್ರಿಸಬೇಕಾದದ್ದು ಇಲಿಯನ್ನು. ಹೊಲದ ಸತ್ವವನ್ನು ಹಾಳುಮಾಡುವ ಕರಿಕೆಯನ್ನು ತೆಗೆದು
ಕೃಷಿಯಲ್ಲಿ ಉತ್ತಮ ಫಸಲು ತೆಗೆಯಿರೆಂದು ಗಣಪ ನೀಡಿದ ಸೂಚನೆ. ಅಲ್ಲದೆ ಒಕ್ಕಲುಮಗ ಬೆಳೆದ ಹಣ್ಣು
ಹಂಪಲ ತನಗೆ ನೈವೇದ್ಯಕ್ಕೆ ಸಲ್ಲುತ್ತವೆ ಎಂದೂ ತಿಳಿಸಿದ. ಈಗಲೂ ಗಣಪನ ಮುಂದೆ ಹುಣಶೆ ಪೇರಲ
ಹಣ್ಣನ್ನು ಕಟ್ಟುವ ಪದ್ಧತಿ ಇದೆ.
ಒಕ್ಕಲುಮಗನಾಗಿ
ಬೆಳೆ ಬೆಳೆದು ಜನಸಮುದಾಯದ ಏಳ್ಗೆಗೆ ಕಾರಣನಾದ ಗಣಪ ಕೂತು ಉಣ್ಣುವವರ ವಿರೋಧಿಯಾಗಿದ್ದ.
ಇಷ್ಟೊತ್ತಿಗೆ ನಾಗರಿಕರಾಗಿ ಬೆಳೆದ ಕೆಲವರು ಈ ರೈತರ ದವಸ ಧಾನ್ಯ ಸಂಪತ್ತನ್ನು ಮತ್ತು ಅವರ ಕೃಷಿ
ಕಾಯಕದ ಆಧಾರ ಸ್ತಂಭವಾಗಿದ್ದ ಪಶುಗಳನ್ನು ಬಲಿಕೊಡುವ ಯಜ್ಞ ಯಾಗಾದಿಗಳನ್ನು ಮಾಡುತ್ತ ಈ ಅಮಾಯಕ
ಜನರ ದುಡಿಮೆಯನ್ನು ವ್ಯರ್ಥಗೊಳಿಸಹತ್ತಿದರು. ದೇವರು, ಸ್ವರ್ಗ, ಧರ್ಮದ ಹೆಸರಿನಲ್ಲಿ ಈ ಜನರನ್ನು ಶೋಷಿಸತೊಡಗಿದರು. ಈಗ ಸುಮ್ಮನಿರದ ಗಣಪ ಅವರ ವಿರುದ್ಧ
ಬಂಡೇಳುತ್ತಾನೆ. ಅವರ ಯಜ್ಞಗಳಿಗೆ ವಿಘ್ನ ಮಾಡುತ್ತಾನೆ. ಹೀಗ್ಗೆ ವಿಘ್ನ ಕಾರಕನಾಗಿ
ವಿಘ್ನೇಶ್ವರನಾಗಿ ರೂಪತಾಳುತ್ತಾನೆ. ಗಣಪ ಈ ಕಾಲದಲ್ಲಿ ವಿಘ್ನ ಕಾರಕನಾಗಿದ್ದಾನೆಯೇ ಹೊರತು
ವಿಘ್ನವಿನಾಶಕನಲ್ಲ.
ವಿಘ್ನವನ್ನುಂಟು
ಮಾಡುವ ಇಂತಹ ಗಣಪನನ್ನು ನಾಗರಿಕ ಸಮಾಜದ ಜನ ಮನೆಗೆ ಅಹ್ವಾನಿಸಿ ಸಿಹಿ ಊಟ ಹಾಕಿ
ಮನವೊಲಿಸಿಕೊಳ್ಳಲು ಪ್ರಯತ್ನಿಸಿದರು. ಅವರ ಮನೆಯಲ್ಲಿ
ಕಜ್ಜಾಯ ಕಡಬು ತಿಂದ ಗಣಪ ತನ್ನ ರೈತ ಸಮುದಾಯದ ಹೋರಾಟದಿಂದ ದೂರ ಉಳಿದ. ಆ ರೈತರಲ್ಲಿ
ಒಬ್ಬನಾದ ಜೋಕುಮಾರ ಈ ಗಣಪನ ಭೋಗಜೀವನಕ್ಕೆ ಬೇಸತ್ತ. ನಾಗರಿಕರ ಮನೆಯಲ್ಲಿಯೇ ಟಿಕಾಣಿ ಹೂಡಿದ
ಗಣಪನ್ನನ್ನು ಹುಡುಕುತ್ತ ನಡೆದ. ನಾಗರಿಕರು ಗಣಪನನ್ನು ಒಳಗೆ ಕೂಡ್ರಿಸಿ ನಮ್ಮ ಮನೆಗೆ ಬಂದಿಲ್ಲ
ಎಂದು ಸುಳ್ಳು ಹೇಳಿದರು. ಜೋಕುಮಾರನ ಸಿಟ್ಟು ಗೊತ್ತಿದ್ದ ಗಣಪ ಮುಖವಾಡ ಧರಿಸಿ ಅಡ್ಡಾಡತೊಡಗಿದ.
ಗಣಪ ಜೋಕುಮಾರನಿಗೆ ಸಿಗದಂತೆ ತಿರುಗಾಡಿದ. ಕೊನೆಗೆ ಒಂದು ದಿನ ಸಿಕ್ಕ. ಈವರೆಗೆ ಕಾಡಿಸಿದ
ಗಣಪನನ್ನು ಹೆಗಲ ಮೇಲೆ ಹೊತ್ತ ಜೋಕುಮಾರ- ಗಣಪ್ಪ
ಗಣಪ್ಪ ಮೋರಯ್ಯ , ಪುಂಡಿಪಲ್ಲೆ ಸೂರಯ್ಯ - ಎಂದು ಹೊಳೆ ಕಾಣಿಸಿದ. ನಿನ್ನಂತಹ ನಾಯಕ ನಮಗೆ
ಬೇಡ ಎಂದು ನಿರ್ಧರಿಸಿದ.
ಈಶ್ವರ ಗುಡಿಯಲ್ಲಿ
ಇರುವ ಲಿಂಗ ಬೀಜದ ಸಂಕೇತ. ಪಾಣಿ ಬಟ್ಟಲು ಭೂಮಿ ಗೌರಿಯ ಸಂಕೇತ. ಮೇಲಿನ ಧಾರಾ ಬಟ್ಟಲಿಂದ ಸುರಿಯುವ
ನೀರು ಗಂಗೆ. ಮಣ್ಣು,ಬೀಜ,ನೀರು ಕೃಷಿ ಕಾಯಕದ
ಅಗತ್ಯಗಳು. ಈ ಮೂರರ ಜೊತೆ ಭೂಮಿಯನ್ನು ಉತ್ತಿ ಬಿತ್ತುವ ನಂದಿಯೂ ಬೇಕು. ಹೀಗಾಗಿ ಗುಡಿಯಲ್ಲಿ ಈ
ನಾಲ್ಕು ಕೃಷಿ ಸಂಕೇತಗಳಿರುವದನ್ನು ಕಾಣಬಹುದು.
ಹೀಗೆ ರೂಪತಾಳಿದ.
ನಮ್ಮ ಸಂಸ್ಕೃತಿಯ ಕೃಷಿ ರೂಪಕದ ಮುಂದಿನ ರೂಪವೇ ಗಣಪತಿ. ಶಿವ, ಗೌರಿಯ ಮಗ
ಗಣಪ ಎನ್ನುವುದು ಮಣ್ಣಿನ ಮಗ ರೈತ ಎನ್ನುವುದನ್ನೇ
ಸೂಚಿಸುತ್ತದೆ. ಬೀಜ ನೆಲ ಜಲಗಳನ್ನು ಸಮರ್ಥವಾಗಿ ಉಪಯೋಗಿಸಿ ಕೃಷಿ ವಿಜ್ಞಾನಿಯಾದ.
ಹೀಗೆ ನಮ್ಮ
ಪರಂಪರೆಯ ಪುರಾಣಗಳ ಆಳದಲ್ಲಿ ಹುದುಗಿದ ವಿಸಿಷ್ಟ ಸಾಂಕೇತಿಕ ಅರ್ಥವನ್ನು ಶೋಧಿಸಬೆಕಾಗಿದೆ.
*****
ಈಗಲೂ ಜೋಕುಮಾರ
ಮನೆಗೆ ಬಂದಾಗ ಗಣಪತಿ ಇಟ್ಟ ಮಾಡವನ್ನು ಮರೆ ಮಾಡುವ ಸಂಪ್ರದಾಯವಿರುವದನ್ನು ಕಾಣಬಹುದು.
ಹೀಗೆ ಗಣಪತಿ
ಶ್ರಮಜೀವಿ ರೈತನ ರೂಪಕವೂ ಹೌದು. ಅದನ್ನು ತೊರೆದು ಅವಸಾನ ಹೊಂದಿದ ಭೊಗ ಜೀವನದ ರೂಪಕವೂ
ಹೌದು.
