Tuesday, September 8, 2009

ಶಿಶುಪ್ರಾಸದಲ್ಲಿಯ ಶಿವೋಹಂ ಜ್ಞಾನ

ಹತ್ತಿ ಕಟಗಿ
ಬತ್ತಿ ಕಟಗಿ
ಬಾವಣ್ಣವರ
ಬಸಪ್ಪನವರ
ಕೈ ಕೈ ದೂಳಗೈ
ಪಂಚಂ ಪಗಡಂ
ನೆಲಕಡಿ ಹನುಮ
ಧಾತರ ಧರ್ಮ
ತಿಪ್ಪಿ ಮೇಲೆ ಕೋಳಿ
ರಗತ ಬೋಳಿ
***
ಕೈ ಕೈ ಎಲ್ಲಿ ಹೋಯ್ತು ?
ಕದದ ಸಂದ್ಯಾಗ !
ಕದ ಏನ್ ಕೊಟ್ತು ?
ಚೆಕ್ಕಿ ಕೊಟ್ತು !
ಚೆಕ್ಕಿ ಏನ್ ಮಾಡ್ದಿ ?
ಒಲಿಯಾಗ ಹಾಕ್ದೆ !
ಒಲಿ ಏನ್ ಕೊಟ್ತು ?
ಬೂದಿ ಕೊಟ್ತು !
ಬೂದಿ ಏನ್ ಮಾಡ್ದಿ ?
ತಿಪ್ಪಿಗಾಕಿದೆ !
ತಿಪ್ಪಿ ಏನ್ ಕೊಟ್ತು ?
ಗೊಬ್ಬರ ಕೊಟ್ತು !
ಗೊಬ್ಬರ ಏನ್ ಮಾಡ್ದಿ ?
ಹೊಲಕ ಹಾಕಿದೆ !
ಹೊಲ ಏನ್ ಕೊಟ್ತು ?
ಜೋಳ ಕೊಟ್ತು !
ಜೋಳ ಏನ್ ಮಾಡ್ದಿ ?
ಚೊಲೊ ಚೊಲೊ ನಾ ತಿಂದೆ ಸೆರಗ ಮುರಗ ಕುಂಬಾರಗ ಕೊಟ್ಟೆ !
ಕುಂಬಾರ ಏನ್ ಕೊಟ್ಟ ?
ಗಡಿಗಿ ಕೊಟ್ಟ !
ಗಡಿಗಿ ಏನ್ ಮಾಡ್ದಿ ?
ಬಾವ್ಯಾಗ ಬಿಟ್ಟೆ !
ಬಾವಿ ಏನ್ ಕೊಟ್ತು ?
ನೀರು ಕೊಟ್ತು !
ನೀರು ಏನ್ ಮಾಡ್ದಿ ?
ಗಿಡಕ್ಕ ಹಾಕ್ದೆ !
ಗಿಡ ಏನ್ ಕೊಟ್ತು ?
ಹೂವು ಕೊಟ್ತು !
ಹೂವು ಏನ್ ಮಾಡ್ದೆ ?
ದೇವ್ರಿಗೆ ಏರಿಸಿದೆ... !
***

ನಾಕೆಂಟು ಮಕ್ಕಳು ಕೂಡಿ ದುಂಡಗೆ ಕೂತು ಅಂಗೈ ಕೆಳಮುಖ ಮಾಡಿ ನೆಲಕ್ಕಚ್ಚಿ ಒಂದನೆಯ ಕೈಯಿಂದ ಆರಂಭಿಸಿ-ಹತ್ತಿಕಟಗಿ .. ಬತ್ತಿಕಟಗಿ_
ಎನ್ನುತ್ತ ಆಟವಾಡುವಸಂಗತಿ ನಮಗೆ ಗೊತ್ತಿದೆ. ಇಲ್ಲಿರುವ ಆಟದ ಸ್ವರೂಪ ಕುರಿತು ಹೇಳುವುದು ನನ್ನ ಉದ್ದೇಶವಲ್ಲ. ಕೂಡಿ
ಆಡುವದರೊಂದಿಗೆ ಮಕ್ಕಳು ಪಡುವ ಸಂತೋಷದ ಕುರಿತು ಹೇಳುವ ಇರಾದೆಯೂ ನನಗಿಲ್ಲ. ಅದ್ಭುತಲಯ ವಿನ್ಯಾಸದ ವಿವರಣೆಗೂ ನಾ ಕೈ ಹಾಕುವುದಿಲ್ಲ . ಆಟದ ನಿಯಮ ಕುರಿತು ಶುಷ್ಕವಿವರಣೆ ನೀಡುವ ಗೋಜಿಗೂ ನಾನು ಹೋಗುವದಿಲ್ಲ.

ನಾವೆಲ್ಲ ಬಾಲ್ಯದಲ್ಲಿ ಹಾಡಿದ ಈ ಹಾಡು ಇಂದಿಗೂ ಹಚ್ಚ ಹಸಿರು ! ಈ ಹಾಡಿನ ಅರ್ಥ ಏನಿರಬಹುದು ? ಅರ್ಥ ಇರಲಿ, ಇಲ್ಲದಿರಲಿ
ಅದು ನೀಡಿದ ಸಂತೋಷವನ್ನಂತೂ ಮರೆತಿಲ್ಲ ; ಮರೆಯುವಂತಹದಲ್ಲ ! ನಾನು ಬಯಲಾಟ ಕಲಾವಿದರೊಬ್ಬರಿಂದ ಕೇಳಿ ತಿಳಿದ ಅರ್ಥವನ್ನಂತೂ ಇಲ್ಲಿ ವಿವರಿಸಿದ್ದೇನೆ.
ಒಪ್ಪುವುದು ಬಿಡುವುದು ನಿಮಗೆ ಬಿಟ್ಟದ್ದು :


ಹತ್ತಿ ಕಟಗಿ ಎಂದರೆ ಜೀವವಿದ್ದ ಮನುಷ್ಯ. ಬತ್ತಿ ಕಟಗಿಯಾಗುವುದೆಂದರೆ ಸಾಯುವುದು. ಸತ್ತ ಮೇಲೆ ಕೆಲ ಹೊತ್ತಿನಲ್ಲಿಯೆ ದೇಹ [ಶವ]
ಬಾಯುತ್ತದೆ. ಅದಕ್ಕೆ ಬಾಯುವ ಅಣ್ಣನವರು ಅವರು. ( ಬಾವಣ್ಣವರ )ಎರಡು ದಿನ ಹಾಗೆಯೇ ಇಟ್ಟರೆ ಬಸಿಯಪ್ಪನವರೂ ಹೌದು.
(ಬಸಪ್ಪನವರು ) ಆದ್ದರಿಂದಲೇ ಅದು ದೂಳಾಗುವ ಕಾಯ.[ಕೈ ಅಲ್ಲ ಅದು ಕಾಯ] (ಕಾಯ ಕಾಯ ದೂಳ ಕಾಯ.) ಪಂಚ ಭೂತಗಳಲ್ಲಿ ಕರಗಿ
ಹೋಗುವ ಕಾಯ. (ಪಂಚಂ ಪಗಡಂ) ಆ ದೇಹಕ್ಕೆ ಸಂಸ್ಕಾರ ಕೊಡಬೇಕಲ್ಲವೆ ? ನೆಲ ಕಡಿಯಲು ಹನುಮನಿಗೆ ಹೆಳಬೇಕಾಗುತ್ತದೆ.( ನೆಲ ಕಡಿ
ಹನುಮ ) ಧನವಂತರಾದವರು ಧರ್ಮವನ್ನೂ ದಾನವನ್ನೂ ಮಾಡಬೇಕಾಗುತ್ತದೆ. ಮಾಡುತ್ತಾರೆ. (ಧಾತರ ಧರ್ಮ).

ಆದರೆ ಈವರೆಗಿನ ಅವನ ಜೀವನ ತಿಪ್ಪೆಯ ಮೇಲಿನ ಕೋಳಿಯಂತೆ. ಸಂಸಾರದ ಹೊಲಸನ್ನೇ ಕೆದರಿದೆ. (ಕೋಳಿ ಕಾಲಿಗೆ ಗೆಜ್ಜೆ ಕಟ್ಟಿದರೂ
ತಿಪ್ಪೆ ಕೆದರೂದ ಬಿಡೂದಿಲ್ಲ- ಎಂಬ ಗಾದೆ ಮಾತು ಇದನ್ನೇ ಹೇಳುತ್ತದೆ ಎನಿಸುತ್ತದೆ.) ಇದರ ಫಲವಾಗಿ ರಕ್ತದಲ್ಲಿಯೇ ಹುಟ್ಟಿ ಹುಟ್ಟಿ ಬರುವ
ಜನ್ಮಾಂತರವನ್ನು ಪಡೆದಿದೆ. ಇದೇ ತಿಪ್ಪೆಯ ಮೇಲೆಕೋಳಿ ರಗತಬೋಳಿ.

ಈ ಶಿಶುಪ್ರಾಸದ ಮೊದಲ ಭಾಗ ಇಲ್ಲಿಗೆ ಮುಗಿಯಿತು. ಇನ್ನು ಮುಂದಿನ ಭಾಗ ಏನನ್ನು ಹೇಳುತ್ತದೆ ? ಪ್ರಶ್ನೋತ್ತರ ರೂಪ ದಲ್ಲಿರುವ ಇದು
ವಸ್ತುವಿನ ಪರಿವರ್ತನೆಯ ಸತ್ಯವನ್ನು ಸಾಂಕೇತಿಕವಾಗಿ ತಿಳಿಸುತ್ತದೆ. ಜಗತ್ತಿನ ಯಾವ ವಸ್ತುವಿಗೂ ಜೀವಿಗೂ ನಿಜ ಅರ್ಥದಲ್ಲಿ ಸಾವಿಲ್ಲ.
ಅದು ರೂಪಾಂತರ ಹೊಂದುತ್ತಿರುತ್ತದೆ ಅಷ್ಟೆ.
***
ಕಾಯ ಎಲ್ಲಿ ಹೋಯಿತು ? [ಕೈ ಕೈ ಎಲ್ಲಿ ಹೋಯಿತು ? ] ಕದದ ಸಂದಿಯಲ್ಲಿ. ಕದದ ಸಂದಿ ಎಂಬುದು ಮತ್ತೆ ಸಂಸಾರದ ಸಂಗತಿ ಕಡೆಗೆ
ಬೊಟ್ಟು ಮಾಡುತ್ತದೆ. ಇಲ್ಲಿಂದ ಹೊಲ ಏನ್ ಕೊಟ್ಟಿತು ? ಎನ್ನುವವರೆಗೆ ಚಕ್ಕಿ, ಬೂದಿ, ಗೊಬ್ಬರ ಮುಂತಾದವು ರೂಪಾಂತರದ ಸಂಗತಿಗಳನ್ನೇ
ಹೇಳುತ್ತವೆ . ಜೊತೆಗೆ ಬೂದಿ ,ಗೊಬ್ಬರ, ಹೊಲ ಇವು ಕೃಷಿ ಸಂಬಂಧದ ಕ್ರಿಯೆಗಳನ್ನು ಸೂಚಿಸುತ್ತವೆ.

ಕುತೂಹಲಕರ ಸಂಗತಿಯೆಂದರೆ, ಹೊಲ ಕೊಟ್ಟ ಜೋಳವನ್ನು ಚಲೊ ಇದ್ದವನ್ನು ತಾ ತಿಂದು ಸೆರಗು ಮುರಗನ್ನು ಕುಂಬಾರನಿಗೆ ಕೊಡುವ ವಿಧಾನದಲ್ಲಿ.
ಕುಂಬಾರ ಗಡಿಗೆ [ಘಟ] ಸೃಷ್ಟಿ ಮಾಡುವ ಸೃಷ್ಟಿಕರ್ತ. ( ದೇಹಕ್ಕೆ ಘಟ ಎನ್ನುವ ಪರಂಪರೆ ಅನುಭಾವ ಸಾಹಿತ್ಯದಲ್ಲಿದೆ.)ಅವನಿಗೆ ಸೆರಗು ಜೋಳವನ್ನು
ಮಾತ್ರ ಕೊಡುತ್ತಾನೆ ! [ನಮ್ಮ ವರ್ತನೆಗೆ ಈ ಸಂಗತಿಯನ್ನುಹೋಲಿಸಿ ನೋಡಬಹುದು. ದೇವರಿಗೆ ಮಾಡುವ ಕಡಬು ನೈವೆದ್ಯಗಳೆಲ ಚಿಕ್ಕವಿರುತ್ತವೆ ಇಲ್ಲವೆ
ನೆಪಮಾತ್ರಕ್ಕೆ ಇರುತ್ತವೆ.] ಭೋಗ ಜೀವನಕ್ಕೆ ಮೊದಲ ಮಣೆ ಹಾಕಿದ ಮನುಷ್ಯ ಕೊನೆಗೂ ಎಚ್ಚರಗೊಳ್ಳುತ್ತಾನೆ. . (ಗಡಿಗೆ ಏನ್ ಮಾಡಿದಿ ? ) ಹಾಗೆ
ಎಚ್ಚರಗೊಂಡ ಮನುಷ್ಯ ಗಡಿಗೆಯನ್ನು ಭಕ್ತಿಜಲ ತುಂಬಿಕೊಳ್ಳಲು ಬಾವಿಗೆ ಬಿಡುತ್ತಾನೆ.( ಬಾವ್ಯಾಗ ಬಿಟ್ಟೆ) ಆ ಜಲವನ್ನೇ(ಬಾವಿ ಏನ್ ಕೊಟ್ಟಿತು ?
-ನೀರ ಕೊಟ್ಟಿತು ) ಗಿಡಕ್ಕೆ ಹಾಕಿ ಜೀವಾತ್ಮ ಪುಷ್ಪ ಅರಳಲು ಕಾರಣವಾಗುತ್ತಾನೆ. ಹಾಗೆ ಅರಳಿದ ಹೂವನ್ನು ದೇವರಿಗೆ ಅರ್ಪಿಸಿ ಧನ್ಯನಾಗುತ್ತಾನೆ.
(ಹೂವು ಏನ್ ಮಾಡಿದಿ ?- ದೇವರಿಗೆ ಏರಿಸಿದೆ ).

ಇಲ್ಲಿಗೆ ಜೀವನ ಕತೆಗೆ ಒಂದು ಅರ್ಥ ಬರುತ್ತದೆ. ಜೀವನ ಸಾರ್ಥಕವಾಗುತ್ತದೆ. ಮೊದಲ ಭಾಗದ ಅಪೂರ್ಣತೆ ಇಲ್ಲಿ ಪೂರ್ಣವಾಗುತ್ತದೆ. ಇಡೀ ಬದುಕಿನ
ಚಿತ್ರಣವನ್ನು ಇಷ್ಟೊಂದು ಅಡಕವಾಗಿ, ಅರ್ಥಪೂರ್ಣವಾಗಿ ಹೇಳಿದ ರೀತಿ ಬೆರಗು ಹುಟ್ಟಿಸುತ್ತದೆ !

ರಚನೆಯ ಸ್ವರೂಪದಲ್ಲಿ ಒಂದು ಸಂಗತಿಯಿಂದ ಇನ್ನೊಂದು ಸಂಗತಿಗೆ ಖೋ ಕೊಡುತ್ತ ಸಾಗುವ ಈ ಶಿಶುಪ್ರಾಸ ರಂಜನೆಯ ಜೊತೆಗೆ ನೆನಪಿನ ಶಕ್ತಿಯನ್ನು
ಹರಿತಗೊಳಿಸಲು, ಸಹ ಸಂಬಂಧವನ್ನು ಕಲ್ಪಿಸಲು ನೆರವಾಗುತ್ತದೆ. ಮಕ್ಕಳ ಮನೋವಿಕಾಸಕ್ಕೆ ಕಾರಣವಾಗುತ್ತದೆ.

ಶಿಶುಪ್ರಾಸದಲ್ಲಿಯ ಶಿವೋಹಂ ಜ್ಞಾನ

http://vismayanagari.com